ಮೆಕೀವರ್, ರಾಬರ್ಟ್ ಮಾರಿಸನ್ 
1882-1971. ಸ್ಕಾಟಿಷ್-ಅಮೆರಿಕದ ಪ್ರಸಿದ್ಧ ಸಮಾಜಶಾಸ್ತ್ರಜ್ಞ. 1882 ಏಪ್ರಿಲ್ 17ರಂದು ಸ್ಕಾಟ್ಲೆಂಡಿನ ಸ್ಟೋರ್ನೋವೆ ಹೆಬ್ರಿಡಿಸ್ ಎಂಬಲ್ಲಿ ಜನಿಸಿದ. ಎಡಿನ್‍ಬರ್ಗ್ ಮತ್ತು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ತರುವಾಯ ಅಬರ್ಡೀನ್ ಮತ್ತು ಟೊರಾಂಟೊ ವಿಶ್ವವಿದ್ಯಾಲಯಗಳಲ್ಲಿ ಸಮಾಜಶಾಸ್ತ್ರವನ್ನು ಬೋಧಿಸಿದ. 1927ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯವನ್ನು ಸೇರಿ 1929-50ರ ತನಕ ರಾಜಕೀಯ ತತ್ತ್ವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ಲೈಬರ್ ಪ್ರಾಧ್ಯಾಪಕನಾಗಿದ್ದ. ಈತ ಸಮಾಜಶಾಸ್ತ್ರಜ್ಞ ಮಾತ್ರವಲ್ಲ, ರಾಜ್ಯ ಸಿದ್ಧಾಂತಕಾರನೂ ತತ್ತ್ವಜ್ಞಾನಿಯೂ ಶಿಕ್ಷಣವೇತ್ತನೂ ಮಾನವತಾವಾದಿಯೂ ಆಗಿದ್ದ. ವ್ಯಕ್ತಿ ಮತ್ತು ಸಮಾಜಗಳ ಬಗೆಗಿನ ಅನೇಕ ಚಿರಂತನ ಪ್ರಶ್ನೆಗಳನ್ನು ಕೆದಕಲು ಹೊರಟಿದ್ದು ನಿಜವಾದರೂ ಆಧುನಿಕ ಪ್ರಪಂಚದ ಸಮಸ್ಯೆಗಳಾದ ಜನಾಂಗಭೇದ, ಬಾಲಾಪರಾಧ, ಯುದ್ಧ-ಶಾಂತಿ, ಆರ್ಥಿಕ ಪುನಾರ್ರಚನೆ ಕಾರ್ಮಿಕ ಸಂಬಂಧಗಳು ಮೊದಲಾದ ಸಮಸ್ಯೆಗಳನ್ನು ನಿರ್ಲಕ್ಷಿಸಲಿಲ್ಲ. ಹೊಣೆಗಾರಿಕೆಯ ಸ್ಥಾನಗಳಲ್ಲಿದ್ದುಕೊಂಡು ಅವುಗಳಿಗೆ ಪರಿಹಾರಗಳನ್ನು ಸೂಚಿಸಿದ.

	ಈತನ ಮುಖ್ಯ ನಿಲುವುಗಳಿವು : ಸಮಾಜಶಾಸ್ತ್ರ ಸಾಮಾಜಿಕ ಸಂಬಂಧಗಳ ಬಗೆಗಿನ ಶಾಸ್ತ್ರ. ಸಮಾಜವೆಂಬುದು ಸಾಮಾಜಿಕ ಸಂಬಂಧಗಳ ಬಲೆ. ಈ ಸಂಬಂಧಗಳು ಭೌತಿಕ ಸಂಬಂಧಗಳಿಗಿಂತ ಭಿನ್ನವಾಗಿವೆ. ಇಲ್ಲಿ ಜ್ಞಾತೃ ಮತ್ತು ಜ್ಞೇಯ ಸಂಬಂಧವಿದೆ; ಇಂಥ ಸಂಬಂಧಗಳು ವಿವಿಧ ಆಸ್ಥೆಗಳಿಂದ ಪ್ರೇರಿತವಾಗುತ್ತವೆ. ಅವುಗಳಲ್ಲಿ ಎರಡು ವಿಧ. ಮೊದಲನೆಯದಾಗಿ ಇಬ್ಬರು ವ್ಯಕ್ತಿಗಳ ನಡುವೆ ಸಮಾನ ಅಥವಾ ಸದೃಶ ಆಸ್ಥೆಗಳಿದ್ದು ಅವರು ಅವನ್ನು ವೈಯಕ್ತಿಕವಾಗಿ ಪೂರೈಸಿಕೊಳ್ಳಬಹುದು. ಎರಡನೆಯದಾಗಿ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಅವುಗಳನ್ನು ಸಾಮೂಹಿಕವಾಗಿ ಸಾಧಿಸಿ ಸಾಮೂಹಿಕವಾಗಿ ಉಪಭೋಗಿಸಬಹುದು. ಈ ವರ್ಗೀಕರಣವನ್ನೂ ಆಧರಿಸಿ ಸಮೂಹಗಳಲ್ಲಿ ಮೂರು ಪ್ರಭೇದಗಳನ್ನು ಕಾಣಬಹುದು. 
ಮೊದಲನೆಯದು. ವಿಶೇಷೀಕೃತವಲ್ಲದ ಸಮಗ್ರವೂ ಸರ್ವಗ್ರಾಹಿಯೂ ಆದ ಆಸ್ಥೆಗಳಿಂದ ಹುಟ್ಟಿದ ಸಮೂಹಗಳು; ಸಮುದಾಯಗಳು ಇಂಥ ವರ್ಗಕ್ಕೆ ಸೇರಿವೆ. ಸಾಮಾನ್ಯ ಜೀವನದ ಎಲ್ಲ ಅಗತ್ಯಗಳನ್ನು ಪೂರೈಸಲೆಂದು ಸಹಜವಾಗಿ ಪೂರ್ವ ನಿಯೋಜನೆಯಿಲ್ಲದೆ ಬರುತ್ತವೆ. ಎರಡನೆಯ ಮಧ್ಯಂತರ ಸಮೂಹಗಳಲ್ಲಿ ಜನರಿಗೆ ತಮ್ಮ ಸಾಮಾನ್ಯ ಆಸ್ಥೆಗಳ ಅರಿವು ಇರಬಹುದಾದರೂ ನಿಶ್ಚಿತವಾದ ಶಾಶ್ವತ ಸಂಘಟನೆಯಿಲ್ಲ. ಉದಾಹರಣೆಗೆ ವರ್ಗಗಳು, ಜನಾಂಗಗಳು, ಜನಸಂದಣಿಗಳು ಇತ್ಯಾದಿ. ಮೂರನೆಯ ಪ್ರಭೇದವನ್ನು ಸಂಘಗಳೆನ್ನಬಹುದು. ಇವು ಸದಸ್ಯರ ವಿಶಿಷ್ಟ ಸಮಾನ ಆಸ್ಥೆಗಳನ್ನು ಪೂರೈಸುತ್ತವೆ. ಇವುಗಳಲ್ಲಿ ಮೂಲಭೂತವಾದ ಸಾಂಸ್ಕøತಿಕ ಪ್ರಾಥಮಿಕ ಆಸ್ಥೆಗಳನ್ನು ತೃಪ್ತಿಪಡಿಸುವ ಪ್ರಾಥಮಿಕ ಸಮೂಹಗಳೂ ನಾಗರಿಕತೆಯ ಉಪಭೋಗದ ಆಸ್ಥೆಗಳನ್ನು ತೃಪ್ತಿಪಡಿಸುವ ಮಾಧ್ಯಮಿಕ ಸಮೂಹಗಳೂ ಇವೆ. ಆಧುನಿಕ ಪ್ರಪಂಚದಲ್ಲಿ ಇವು ಪ್ರಬಲವಾಗಿ ವೃದ್ಧಿಗೊಂಡಿವೆ. ಇದಕ್ಕೆ ಸಂಬಂಧಿಸಿದಂತೆ ಈತ ನಂಬುವ ವಿಕಾಸ ತತ್ತ್ವವೊಂದಿದೆ. ಅದೆಂದರೆ ವಿಕಾಸದ ಪ್ರಥಮ ಘಟ್ಟದಲ್ಲಿ ಸಮಾಜಗಳು ಸಾಮುದಾಯಿಕವಿದ್ದು ಬರಬರುತ್ತ ಸಾಂಘಿಕವಾದವು. ಆದಿಮ ಸಮಾಜಗಳಲ್ಲಿದ್ದ ಸಾಮಾಜಿಕ ಏಕರೂಪತೆ, ಸಮಗ್ರತೆ, ಬೆಸುಗೆ, ರಕ್ತಬಾಂಧವ್ಯ, ಸಹವಾಸ ಮಾಯವಾಗಿ ವಿಶಿಷ್ಟ. ವಿಶೇಷ, ಸಂಕುಚಿತ, ಸಮಾನ ಆಸ್ಥೆಗಳ ಸಲುವಾಗಿ ಹುಟ್ಟಿದ ಸಂಘಗಳು ಮಹತ್ವ ಪಡೆದು ರಾಷ್ಟ್ರವ್ಯಾಪ್ತಿ ಸಂಘಗಳು ಉದಯವಾದುವು. ಈ ವಿಚಾರಗಳು ಟೊಸಿಸ್‍ನ ವಿಚಾರಗಳನ್ನು ಬಲುಮಟ್ಟಿಗೆ ಹೋಲುತ್ತವೆ.

ಸೊಸೈಟಿ ಎಂಬ ತನ್ನ ಗ್ರಂಥದಲ್ಲಿ ಸಾಮಾಜಿಕ ಪರಿವರ್ತನೆ. ವಿಕಾಸ ಹಾಗೂ ಪ್ರಗತಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾನೆ. ಸಮಾಜ ಸದಾ ಪರಿವರ್ತನ ಶೀಲವಾದುದು. ಅದಕ್ಕೆ ಕಾರಣವಾದ ಮೂರು ಅಂಶಗಳಿವೆ: 1 ತಾಂತ್ರಿಕ 2 ಭೌತಿಕ-ಜೈವಿಕ, 3 ಸಾಮಾಜಿಕ-ಸಾಂಸ್ಕøತಿಕ. ಈ ಕಾರಣಾಂಶಗಳು ಪರಿವರ್ತನೆಗೆ ಚಾಲನೆ ಕೊಡುವುದು ಮಾನವ ಮನಸ್ಸು ಯೋಚಿಸಿ ನಿರ್ಧರಿಸಿದರೆ ಮಾತ್ರ. ರಾಜ್ಯಸಿದ್ಧಾಂತದ ಬಗೆಗೂ ಈತ ತನ್ನ ಗ್ರಂಥಗಳಲ್ಲಿ ಚರ್ಚಿಸಿದ್ದಾನೆ. ಸಮಾಜ ಮತ್ತು ರಾಜ್ಯ ಇವು ಸಮಾನಾರ್ಥಕ ಪದಗಳಲ್ಲ. ಸಮಾಜ ರಾಜ್ಯಕ್ಕಿಂತ ವಿಶಾಲವಾದ ಕಲ್ಪನೆ. ಎಲ್ಲ ಸಂಸ್ಥೆಗಳಂತೆ ರಾಜ್ಯವೂ ಮಾನವ ಉದ್ದೇಶ ಸಾಧನೆಗಾಗಿ ನಿರ್ಮಿತವಾದೊಂದು ಸಂಸ್ಥೆ ಅದಕ್ಕೆ ಇತಿಮಿತಿಗಳಿವೆ. ಅದು ಕೈಗೊಳ್ಳಲೇಬೇಕಾದ ಕಾರ್ಯಗಳಿರುವಂತೆ ಅದು ಪ್ರವೇಶ ಮಾಡಲೇಬಾರದ ಕ್ಷೇತ್ರಗಳೂ ಇವೆ ಎಂದಿದ್ದಾನೆ.

ಈತನ ಪ್ರಕಾರ ಸಮಾಜವಿಜ್ಞಾನಗಳಲ್ಲಿ ವಸ್ತುನಿಷ್ಠ ವಿಶ್ಲೇಷಣೆಗೆ ಮಹತ್ವವಿದೆ ಎಂಬುದು ನಿಜವಾದರೂ ವ್ಯಕ್ತಿನಿಷ್ಠ ಅರಿವಿಗೂ ಸ್ಥಾನವಿದೆ. ಅಳತೆಯೇ ಜ್ಞಾನವಲ್ಲ. ಅತಿವಿಶೇಷಜ್ಞಾನ, ಪ್ರಾಯೋಗಿಕತೆ ಅಂಕಿಸಂಖ್ಯೆಗಳ ಬಗೆಗಿರುವ ಮೋಹ ಬಿಡಬೇಕೆಂದು ಅವನ ಅಭಿಪ್ರಾಯ. ಈತನ ಶೈಲಿ ಸರಳ, ಸುಂದರ ಹಾಗೂ ಸಾಹಿತ್ಯಕವಾಗಿದೆ. ಸಮಾಜಶಾಸ್ತ್ರದ ಮೂಲಭೂತ ಕಲ್ಪನೆಗಳನ್ನು ಸರ್ವಸಮ್ಮತವಾಗುವಂತೆ ಪ್ರಚಾರ ಮಾಡಿದ್ದು ಮಾತ್ರವಲ್ಲ-ಪರಿವರ್ತನೆ, ವಿಕಾಸ, ಪ್ರಗತಿಗಳ ಬಗೆಗೆ ಸರಿಯಾದ ಕಲ್ಪನೆ ಕೊಟ್ಟ. ಸಮುದಾಯ-ಸಂಘ, ಸಂಸ್ಕøತಿ-ನಾಗರಿಕತೆ, ರಾಜ್ಯ-ಸಮಾಜಗಳ ಭೇದಗಳನ್ನು ಸ್ಪಷ್ಟಪಡಿಸಿದ. ಆಸ್ಥೆಗಳನ್ನು ಆಧರಿಸಿ ಸಮೂಹಗಳನ್ನು ವರ್ಗೀಕರಿಸಿದ. ಸಾಮಾಜಿಕ ವಿಕಾಸ ತತ್ತ್ವವನ್ನು ಅತಿರೇಕಗಳಿಲ್ಲದಂತೆ ಪ್ರತಿಪಾದಿಸಿದ. ರಾಜ್ಯ ವಿಷಯಕ್ಕೆ ಸಮಾಜಶಾಸ್ತ್ರಕ್ಕೆ ಸಾಕಷ್ಟು ಅಡಿಪಾಯ ಹಾಕಿದ. ವ್ಯಕ್ತಿ ಮತ್ತು ಸಮಾಜದ ಅನ್ಯೋನ್ಯತೆಯನ್ನು ಸೋದಾಹರಣವಾಗಿ ವಿವರಿಸಿದ. ಸಾಮಾಜಿಕ ಕಾರ್ಯಕಾರಣ ಸಂಬಂಧಗಳ ಬಗ್ಗೆ ಚರ್ಚಿಸಿದ. ಮಾರ್ಗಾನ್ವೇಷಕವಾದ ಹೊಸ ಸಿದ್ಧಾಂತಗಳನ್ನು ಮಂಡಿಸಲಿಲ್ಲ ಎಂಬುದು ಬಹುಮಟ್ಟಿಗೆ ನಿಜವಾದರೂ ಸಮಾಜಶಾಸ್ತ್ರದ ಸಿದ್ಧಾಂತಗಳನ್ನೇ ಶೋಧಿಸಿ ವ್ಯವಸ್ಥೆಗೊಳಿಸಿ ಪ್ರಚಾರ ಮಾಡಿದ ಶ್ರೇಯಸ್ಸು ಈತನಿಗೆ ಸಲ್ಲಬೇಕು.	

ಈತನ ಪ್ರಮುಖ ಕೃತಿಗಳು: ದಿ ಮಾಡರ್ನ್ ಸ್ಟೇಟ್ (1928), ಸೋಶಿಯಲ್ ಕಾಸೇಶನ್ (1942), ದಿ ವೆಬ್ ಆಫ್ ಗವರ್ನಮೆಂಟ್ (1947), ಸೊಸೈಟಿ ಆ್ಯನ್ ಇನ್ಟ್ರೊಡಕ್ಟರಿ ಅನ್ಯಾಲಿಸಿಸ್ (1949). ಪಸ್ರ್ಯೂಟ್ ಆಫ್ ಹ್ಯಾಪಿನೆಸ್ (1955).

ಈತ ಅನಾರೋಗ್ಯದಿಂದಾಗಿ 1971ರಲ್ಲಿ ನಿಧನವಾದ.					
(ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ